"ದೇವಕವಿ":~
ಸು. 1200. ಕನ್ನಡದಲ್ಲಿ ಸುಪ್ರಸಿದ್ಧವಾಗಿರುವ ಮೂರು ಶೃಂಗಾರ ಕಾವ್ಯಗಳಲ್ಲೊಂದಾದ "ಕುಸುಮಾವಳಿಯ" ಕರ್ತೃ. ಆದರೆ ಕೃತಿಕಾರನೀತನೆಂದು ಕಾವ್ಯದಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಉಕ್ತವಾಗಿಲ್ಲ. ಆದರೆ ಹದಿನೈದನೆಯ ಆಶ್ವಾಸದಲ್ಲಿ ಭೇರೀರವನ್ನು ವರ್ಣಿಸುವ ಸಂದರ್ಭದಲ್ಲಿ ಬರುವ ಕವಿಕಮಳಜಸೂಕ್ತಿಸುಧಾರ್ಣವ ಸೋಮಂ ದೇವಕವಿದಲ್ ಎಂಬ ಭಾಗದ ಆಧಾರದ ಮೇಲೆ ಇದು ಕವಿಯ ಹೆಸರಿರಬಹುದೆಂದು ಊಹಿಸಲಾಗಿದೆ. ಕಮಳಜಸೂಕ್ತಿಸುಧಾರ್ಣವಸೋಮಂ ಎಂದಿರುವುದುರಿಂದ ಆತನ ಕಾವ್ಯರಚನೆಯಲ್ಲಿ ಈತನ ಕೈವಾಡವೂ ಸೇರಿರಬೇಕು. ಈ ಊಹೆಗನುಗುಣವಾಗಿ ಇವರಿಬ್ಬರ ಕಾವ್ಯಗಳಲ್ಲಿ ಸಂವಾದಿ ಪದ್ಯಗಳು ದೊರೆಯುವುವು. 
ಈತನ ಕಾಲವೂ ಸ್ಪಷ್ಟವಾಗಿ ತಿಳಿಯದು. ಮಲ್ಲಿಕಾರ್ಜುನ ಸೂಕ್ತಿಸುಧಾರ್ಣವದಲ್ಲಿ (1241) ಈತನ ಪದ್ಯಗಳೂ ಉದಾಹೃತವಾಗಿರುವುದರಿಂದಲೂ ಈತ ರುದ್ರಭಟ್ಟ (ಸು. 1180) ಮತ್ತು ಅಗ್ಗಳರನ್ನು (1189) ಸ್ತೋತ್ರ ಮಾಡಿರುವುದರಿಂದಲೂ ಈ ಮಧ್ಯ ಕಾಲದಲ್ಲಿ ಅಂದರೆ ಸುಮಾರು 1200ರಲ್ಲಿದ್ದಿರಬಹುದೆಂದು ಕವಿಚರಿತಕಾರರು ಅಭಿಪ್ರಾಯಪಟ್ಟಿದ್ದಾರೆ. 

ಕವಿ ತನ್ನ ಗ್ರಂಥಕ್ಕೆ "ಚಿಕ್ಕರಾಜ ಚಮೂಪ"ನೆಂಬುವನು ನಾಯಕನೆಂದೂ ಆತ ಕಾಶ್ಮೀರದವನೆಂದೂ ಕೇಶವದಂಡನಾಯಕನ ಪೌತ್ರನೆಂದೂ ಲಕ್ಷ್ಮೀಧರನ ಜ್ಯೇಷ್ಠ ಪುತ್ರನೆಂದೂ ವಿಠಲ ಧರ್ಮದೇವರ ಅಣ್ಣನೆಂದೂ ಅಲ್ಲದೆ ತಾನು ಚಮೂಪನಾಗಿಯೂ ಮಂತ್ರಿಯಾಗಿಯೂ ಇದ್ದೆನೆಂದೂ ಹೇಳಿಕೊಂಡಿದ್ದಾನೆ. ಆದರೆ ಎಲ್ಲಿ ಯಾರಲ್ಲಿ ಎಂಬುದನ್ನು ವಿಶದಪಡಿಸಿಲ್ಲ. 
ಈತನಿಗೆ ಕವೀಂದ್ರೋತ್ತಂಸ, ಕೃತಿರತಿರಮಣ, ಭಾರತೀಭೂಷಣ ಎಂಬ ಬಿರುದುಗಳಿದ್ದಂತೆ ತಿಳಿಯುತ್ತದೆ. ತನ್ನ ಕವಿತಾಚಾತುರ್ಯವನ್ನು ಹೇಳಿಕೊಳ್ಳುವಾಗ ತನ್ನನ್ನು ಸುಕೃತೀಶ್ರೀಭಾಮೀನಿಮಂಗಳಮಣಿಮಯದಾಮಂ ಬುಧ ಸ್ತುತ್ಯಸಾಹಿತ್ಯ ಕಳಾಸಂದೋಹಸೀಮಂ, ಸುಕವಿಸುಕರಕೀರಾಸ್ಯ ಪುಷ್ಯಾವಳೀ ಕಲ್ಪಕುಜಾರಾಮಂ ಎಂದು ಹೊಗಳಿಕೊಂಡಿರುವುದಲ್ಲದೆ ಶಬ್ದಜ್ಞರನ್ನೂ ಅರ್ಥ ದರ್ಶಿಗಳನ್ನೂ ಉಕ್ತಿಪ್ರೌಢರನ್ನೂ ಭಾವತತ್ಪರನನ್ನೂ ನೀತಿವಿದುರಗಳನ್ನೂ ರಸಿಕರನ್ನೂ ಸಾಹಿತ್ಯದಲ್ಲಿ ಸಂದ ಜಾಣರನ್ನೂ ತಲೆದೂಗಿಸುವ ಉಕ್ತಿಚಾತುರ್ಯವುಳ್ಳವನೆಂದು ಹೇಳಿಕೊಂಡಿದ್ದಾನೆ. 

ಪೂರ್ವ ಕವಿಗಳಲ್ಲಿ ಬಾಣ, ಹರ್ಷ, ಮಾಘ, ರತ್ನ, ರುದ್ರ ಮತ್ತು ಅಗ್ಗಳ ದೇವರನ್ನು ಸ್ತೋತ್ರಮಾಡಿ ತನ್ನ ಕಾವ್ಯದಲ್ಲಿ ಬಾಣನ ಸೂಕ್ತಿಕಳಾಪವೂ ಮಾಘ ಹರ್ಷರವಚಶ್ಚಿತ್ರವೂ ರುದ್ರಭಟ್ಟನ ಪದಪ್ರಗಲ್ಭಗುಣವೂ ಅಗ್ಗಳದೇವನ ಭಾವ ಗೌರವವೂ ಸೇರಿಕೊಂಡಿವೆ ಎಂದಿದ್ದಾನೆ. 

ಕುಸುಮಾವಳಿ ಗ್ರಂಥ ನೇಮಿಚಂದ್ರನ ಲೀಲಾವತಿಯಂತೆ ಶೃಂಗಾರ ಕಾವ್ಯ. ಇದಕೆ ಸಂಸ್ಕøತದ ಸುಬಂಧುವಿನ ವಾಸವದತ್ತೆಯೇ ಮೂಲವಿದ್ದಿರಬೇಕು. ಮೂಲದಲ್ಲಿರುವ ಗುಣದೋಷಗಳೆರಡೂ ಇದರಲ್ಲಿ ಬಿಂಬಿತವಾಗಿವೆ. ಚಂಪೂರೂಪದ ಈ ಗ್ರಂಥ ಒಟ್ಟು 18 ಆಶ್ವಾಸಗಳಿದ್ದಿರಬಹುದು. ಈಗ ಉಪಲಬ್ಧವಾಗಿರುವುದು 15 ಮಾತ್ರ. ಆಶ್ವಾಸದ ಕೊನೆಯಲ್ಲಿ ಇದು ಕಮನಕುಧರೇಂದ್ರನಂದನಾ-ಲೋಲಲೋಚನಚಕೋರಿಸುಖಪ್ರದಪರಮಾಂಗಕಾಂತಿಸಂತಾನಸಾಂದ್ರಚಂದ್ರಿಕಾ-ವಿಭವಶೋಭಾಯಮಾನಶ್ರೀವಿಶ್ವನಾಥ ಚರಣನಖಮಯೂಖೋತ್ಫುಲ್ಲ ಮಲ್ಲಿಕಾ ಶೇಖರಕಂದರ್ಪದೇವಪ್ರಭಾವಪ್ರಶಂಸೋಲ್ಲಸಿತಕುಸುಮಾವಳಿ ಮಹಾಪ್ರಬಂಧ ದೊಳ್ ಎಂಬ ಗದ್ಯಭಾಗವಿದೆ. ಇದರ ಬಂಧ ಪ್ರೌಢವೂ ನಿರರ್ಗಳವೂ ಆಗಿದ್ದರೂ ಇದನ್ನು ಮಧ್ಯಮ ಚಂಪೂಕಾವ್ಯವೆಂದು ಪರಿಗಣಿಸಬಹುದು.			     (ಎನ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ